ಕವಿತೆ

ಹಳಿ

ಒಂದು ಹಳಿಯ ಮೇಲೆ

ಹತ್ತು ಬೋಗಿಗಳ ಜೊತೆಗೆ

ನೂರು ಗಾಲಿಗಳ ಹೇರಿ

ಸಾವಿರ ನಿಮಿಷ ಚಲಿಸಿದರೆ

ಊರು ಬಂದೀತು

ಲಕ್ಷ ಕನಸುಗಳು ಬೆಳೆದು

ಕೋಟಿಯಾಗಲು

ಕೆಲವಷ್ಟಾದರೂ ನನಸಾದೀತು


ಹೊಂಗೂದಲ ಚೆಲುವೆ

ಬೆನ್ನ ಮೇಲಿಳಿದಿರುವ

ಹೊನ್ನ ಕೂದಲಿನಾಣೆ

ಬಿಟ್ಟುಹೋದ ಹಾದಿಯಲ್ಲಿ

ಮತ್ತೆಂದೂ ಸಿಗದಿರು.


ಕಟ್ಟಿಟ್ಟ ಕನಸಕೂಳು

ಬೀದಿ ಪಾಲಾದೀತು.


ಮೌನದೆಲ್ಲಾ ಋತುಗಳ

ವಸಂತಕ್ಕೆ ನೀ ಮಾಮರವಾಗಿರು.

ಚೆನ್ನಕೋಗಿಲೆಯು ಬಂದು

ಮುತ್ತಿಟ್ಟು ಮಧುಸರವ ಹರಿಸೀತು.


ಮೊದಲಿನಿಂದಲೂ ನನಗೆ ಮಕ್ಕಳ ಸಾಹಿತ್ಯ ರಚಿಸುವುದು ಇಷ್ಟದ ಹವ್ಯಾಸವಾಗಿತ್ತು. ಕಿರಿಯ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಿಗೆ ಸಾಲಿನಲ್ಲಿ ಎರಡು ಪದಗಳ ಕವನದ ಮೂಲಕ ನಿರಾಶೆ, ಬಡತನವನ್ನು ಅರ್ಥೈಸುವ ಪ್ರಯತ್ನ.

ಬಡಜೀವ

ಸಿಕ್ಕದು ಕೂಳು

ಕಂಗೆಟ್ಟ ಬಾಳು

ತನುವು ನಲುಗಿತ್ತು

ದೀಪವು ಆರಿ

ತೋಚದು ದಾರಿ

ಛಲವು ಕುಸಿದಿತ್ತು


ಕಷ್ಟಗಳ ಕಂತೆ

ಮುಗಿಯದು ಚಿಂತೆ

ಮನಸು ಬಳಲಿತ್ತು

ದಣಿಸುವ ಹಸಿವು

ಆರದು ದಣಿವು

ದೇಹ ಸೊರಗಿತ್ತು


ದುಬಾರಿಯ ಸಂತೆ

ಸುಖಸ್ವಪ್ನಗಳಂತೆ

ಜೇಬು ಕಮರಿತ್ತು

ಬಾರದು ಮಳೆ

ಬದುಕದು ಬೆಳೆ

ಸಾಲ ಬೆಳೆದಿತ್ತು


ತೊಲಗದು ವ್ಯಥೆ

ಮಿಡಿಯುವ ಕಥೆ

ಜಗವೇ ಕೊರಗಿತ್ತು

ಸಿರಿತನದ ಒಡಲು

ಗಹಗಹಿಸಿ ನಗಲು

ವಿಧಿಯೂ ಮರುಗಿತ್ತು


ಕಾಣದ ಕಡಲು

ಬಂಧಿಸುವ ಮೊದಲು

ಜೀವ ಸವೆದಿತ್ತು

ಬಡತನವು ಸುಡಲು

ಉರುಳಿತ್ತು ಸರಳು

ಆಟವೇ ಮುಗಿದಿತ್ತು


   
Back to Top